101+ Basavannana Vachanagalu | ಬಸವಣ್ಣನ ವಚನಗಳು

Author:

Published:

Updated:

Last Updated on August 8, 2023

ಇಲ್ಲಿ ನಾವು ೧೦೧ ಬಸವಣ್ಣನ ವಚನಗಳನ್ನು (Basavannana Vachanagalu)ಸಂಗ್ರಹಿಸಿದ್ದೇವೆ. ನೀವು ಈ ಬಸವಣ್ಣನ ವಚನಗಳನ್ನು ಎಲ್ಲಿಯೂ ಕೂಡ ಉಪಯೋಗಿಸಬಹುದು.

ವಚನಗಳನ್ನು ನೀವು copy ಕೂಡ ಮಾಡಬಹದು ಮತ್ತು ಇದರ ಜೊತೆಗೆ ನಾವು ಬಸವಣ್ಣನ ವಚನಗಳ ಚಿತ್ರವೂ ಕೊಟ್ಟಿದ್ದೇವೆ ಅದನ್ನು ನೀವು download ಕೂಡ ಮಾಡಬಹದು.

100+ Basavanna Vachanagalu

1. ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ
ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.

2. ಅಂಕ ಕಳನೇರಿ ಕೈಮರೆದಿರ್ದಡೆ
ಮಾರಂಕ ಬಂದಿರಿವುದ ಮಾಬನೆ
ನಿಮ್ಮ ನೆನಹ ಮನ ಮರೆದಿರ್ದಡೆ
ಮಾಯೆ ತನುವನಂಡಲೆವುದ ಮಾಬುದೆ
ಕೂಡಲಸಂಗಯ್ಯನ ನೆನೆದಡೆ,
ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.

3. ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ,
ಕಾದಿ ಗೆಲಿಸಯ್ಯಾ ಎನ್ನನು.
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ.

4. ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ
ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ,
ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ,
ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.

5. ಅಂಗದ ಮೇಲೆ ಲಿಂಗ ಆಯತವಾಗಿ
ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು,
ಪ್ರಾಣದ ಮೇಲೆ ಲಿಂಗ[ಸ್ವಾ]ಯತವ ಮಾಡಿ
ಎನ್ನಂತರಂಗ ಶುದ್ಧವ ಮಾಡಿ
ಲಿಂಗೈಕ್ಯದ ಹೊಲಬ ತೋರಿದನಯ್ಯಾ, ಚೆನ್ನಬಸವಣ್ಣನು. ಕಾಯದ ಕಳವಳವು
ದಾಸೋಹದ ಮುಖದಲ್ಲಿ ಅಲ್ಲದೆ ಹರಿಯದೆಂದು
ಜಂಗಮಮುಖಲಿಂಗವಾಗಿ ಬಂದು
ಎನ್ನ ಶಿಕ್ಷಿಸಿ ರಕ್ಷಿಸಿ
ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ, ಪ್ರಭುದೇವರು.
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಚೆನ್ನಬಸವಣ್ಣನ
ಕರುಣದಿಂದಲಾನು ಬದುಕಿದೆನು.

6. ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ?
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ.

7. ಅಂಗದಲಳವಟ್ಟ ಲಿಂಗಕ್ಕೆ ಅಂಗವೆ ಭಾಜನ,
ಪ್ರಾಣದ ಮೇಲಣ ಲಿಂಗಕ್ಕೆ ನಿರ್ಭಾವವೆ ಭಾಜನ.
ಅರಿವಿನ ಮೇಲಣ ಲಿಂಗಕ್ಕೆ ನಿರ್ಭಾವವೆ ಭಾಜನ
ಕೂಡಲಸಂಗಮದೇವಯ್ಯಾ,
ಪ್ರಭುದೇವರು ಆರೋಗಣೆಯ ಮಾಡುವಡೆ
ಭಕ್ತಿಪರಿಯಾಣವಲ್ಲದೆ ಬೇರೆ ಭಾಜನವ ಕಾಣೆನು.

8. ಅಂಗದಲ್ಲಿ ಅರ್ಪಿತವಾದ ಸುಖವು
ಲಿಂಗದಲ್ಲಿ ಲೀಯವಾಯಿತ್ತೆಂದಡೆ
ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ
ಕಾರಣವೇಕಯ್ಯಾ ಶರಣಂಗೆ
ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ
ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ,
ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ
ಹೇಳಯ್ಯಾ ನಿಮ್ಮ ಧರ್ಮ.

9. ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ,
ಸಂದು ಭೇದವಳಿವ ಪರಿ ಎಂತು ಹೇಳಾ
ಅಂಗದಲ್ಲಿ ಸಂಗವ ಮಾಡಿಹೆನೆಂದಡೆ,
ಮುಂದುಗೆಡಿಸಿ ಕಾಡುವನು ಶಿವನು.
ಕಾಮವೆಂಬ ಬಯಕೆಯಲ್ಲಿ
ಅಳಲಿಸುವ ಬಳಲಿಸುವ ಶಿವನು.
ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ,
ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು.
ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು.
ಕೂಡಲಸಂಗಮದೇವರ ಬೆರಸುವಡೆ,
ಭಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.

10. ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,
ಕಂಗಳಿಚ್ಛೆಗೆ ಪರವಧುವ ನೆರೆವರು.
ಲಿಂಗಲಾಂಛನಧಾರಿಯಾದಲ್ಲಿ ಫಲವೇನು
ಲಿಂಗಪಥವ ತಪ್ಪಿ ನಡೆವವರು
ಜಂಗಮಮುಖದಿಂದ ನಿಂದೆ ಬಂದಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವಾ.

11. ಅಂಗಯ್ಯ ಒಳಗಣ ಲಿಂಗವ ನೋಡುತ್ತ,
ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ
ನೋಟವೆ ಪ್ರಾಣವಾಗಿ ಎಂದಿಪ್ಪೆನೊ
ಕೂಟವೇ ಪ್ರಾಣವಾಗಿ ಎಂದಿಪ್ಪೆನೊ
ಎನ್ನ ಅಂಗವಿಕಾರದ ಸಂಗವಳಿದು,
ಕೂಡಲಸಂಗಯ್ಯಾ, ಲಿಂಗ ಲಿಂಗವೆನುತ್ತ.

12. ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ
ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವಾ.

13. ಅಂಗವಿಕಾರವಳಿದು ಸತಿಯ ಸಂಗವರಿಯ ನೋಡಾ,
ದೇಹಗುಣಂಗಳಿಲ್ಲಾಗಿ ನಿರ್ದೆಹಪ್ರಸಾದಿ ನೋಡಯ್ಯಾ,
ಅಶನವ್ಯಸನಾದಿಗಳೆಲ್ಲವು ಬೆಂದವು ನೋಡಯ್ಯಾ.
ಈ ಎಲ್ಲ ಗುಣಂಗಳಳಿದು ಕೂಡಲಸಂಗಮದೇವರಲ್ಲಿ
ಸಾವಧಾನಿ ಪ್ರಸಾದಿ ಚೆನ್ನಬಸವಣ್ಣನು.

14. ಅಂಗುಲ ಹನ್ನೆರಡು ಕೂಡಲು ಒಂದು ಗೇಣು,
ಗೇಣು ಎರಡು ಕೂಡಲು ಒಂದು ಮೊಳ,
ಮೊಳವೆರಡು ಕೂಡಲು ಒಂದು ಹಸ್ತ,
ಹಸ್ತವೆರಡು ಕೂಡಲು ಒಂದು ಮಾರು,
ಮಾರೆರಡು ಕೂಡಲು ಒಂದು ಜಂಘೆ,
ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ,
ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ,
ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ,
ಹರದಾರಿ ನಾಲ್ಕು ಕೂಡಲು ಒಂದು ಯೋಜನ,
ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು
ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು.
ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ
ಕೂಡಲಸಂಗಯ್ಯಾ
ನಿಮ್ಮೊಳು ಕಂಡು ಸುಖಿಯಾಗಿರ್ದೆನು.

15. ಅಂಗೈ ತಿಂದುದೆನ್ನ, ಕಂಗಳು ಕೆತ್ತಿಹವಯ್ಯಾ,
ಬಂದಹರಯ್ಯಾ ಪುರಾತರೆನ್ನ ಮನೆಗೆ,
ಬಂದಹರಯ್ಯಾ ಶರಣರೆನ್ನ ಮನೆಗೆ.
ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ,
ಶಿವಾರ್ಚನೆಯ ಮಾಡುವೆ,
ಕೂಡಲಸಂಗಮದೇವಯ್ಯಾ, ನಿಮ್ಮ ಮುಂದೆ.

16. ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ,
ಆಳಿನಾಳು ಕೀಳಾಳು ಬಹರೆ
ಹೋಗದಿರು, ಹೋಗದಿರು, ಕೂಡಲಸಂಗಮದೇವಾ. 

17. ಅಂಜದಿರು ಅಳುಕದಿರು,
ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು.
ಏನೊ ಎಂತೊ ಎಂದು ಚಿಂತಿಸದಿರು,
ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ. 

18. ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ. 

19. ಅಂತರಂಗ ಬಹಿರಂಗ ಆತ್ಮಸಂಗ ಒಂದೆ ಅಯ್ಯಾ !
ನಾದಬಿಂದುಕಳಾತೀತ, ಆದಿಯಾಧಾರ ನೀನೆ ಅಯ್ಯಾ !
ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ !

20. ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ.

21. ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.
ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು,
ಮೃಡ ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು-
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.

22. ಅಂದಾ ತ್ರಿಪುರವನುರುಹಿದಾತ ವೀರ,
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ,
ಕಡುಗಲಿ ನರಸಿಂಹನನುಗಿದಾತ ವೀರ,
ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ,
ನಮ್ಮ ಕೂಡಲಸಂಗನಲ್ಲಿ ಮಡಿವಾಳ ವೀರ.

23. ಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ’ಬವಂಗೆ,
ದಿನವಿಂದೇ ‘ಹರ ಶರಣೆಂ’ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.

24. ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ,
ವೀರರ ನಿಗ್ರಹಿಸಿ ನೀರು ಮಾಡಿ, ಧೀರರ ಧೃತಿಗೆಡಿಸಿ,
ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ,
ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ,
ಕೂಡಲಸಂಗಮದೇವಾ.

25. ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ !
ಓಂ ನಮಃ ಶಿವಾಯ ಎಂಬುದೇ ಮಂತ್ರ,
ಓಂ ನಮಃ ಶಿವಾಯ ಎಂಬುದೇ ತಂತ್ರ,
ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ.

26. ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ,
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ,
ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ
ಪರಲೋಕದೂರನ ಏಕೆ ಹುಟ್ಟಿಸಿದೆ
ಕೂಡಲಸಂಗಮದೇವಾ ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿಲ್ಲವೆ.

27. ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ.

28. ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ,
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ,
ಜಂಗಮವಾಪ್ಯಾಯನವಾದಡೆ ಲಿಂಗ ಸಂತ್ಟುಯಹುದಯ್ಯಾ.
ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ
ಅಹಂ ತುಷ್ಟೋಡಿಸ್ಮ್ಯುಮಾದೇವಿ ಉಭಯೋರ್ಲಿಂಗಜಂಗಮಾತ್
ಇದು ಕಾರಣ ಕೂಡಲಸಂಗಮದೇವರಲ್ಲಿ
ಜಂಗಮವಾಪ್ಯಾಯನವಾದಡೆ ಲಿಂಗಸಂತ್ಟು.

29. ಅಗ್ಫವಣಿಯವಸರ ಸದಾಚಾರ ಸತ್ಕ್ರೀಯೆಂಬ ಭೂಮಿಯ ಮೇಲೆ
ಸರ್ವಶುದ್ಧವೆಂಬ ಗೋಮಯವ ತಂದು,
ವಿನಯಾರ್ಥವೆಂಬ ಉದಕದಿಂದ ಸಮ್ಮಾರ್ಜನೆಯಂ ಮಾಡಿ
ತನುವಿನ ಅವಗುಣಂಗಳಂ ಹುಡಿಗುಟ್ಟಿ ರಂಗವಾಲೆಯನಿಕ್ಕಿ,
ಅಕ್ಷಯವೆಂಬ ಬಿಂದಿಗೆಯಲ್ಲಿ ಪರಮಾನಂದವೆಂಬ ಅಗ್ಫವಣಿಯ ತುಂಬಿ,
ಸಮರಸದಿಂದ ಮಜ್ಜನಕ್ಕೆರೆಯಲು
ಹೃದಯಕಮಲವೆಂಬ ಪುಷ್ಪಮಂ ಸಲಿಸಿ,
ಸೌಖ್ಯತರ ಶಾಂತಿಯೆಂಬ ಗಂಧವನಿಟ್ಟು,
ಅಕ್ಷಯವೆಂಬ ಅಕ್ಷತೆಯನಳವಡಿಸಿ,
ಸದ್ಭಾವವೆಂಬ ಧೂಪಮಂ ಬೀಸಿ, ಸುಜ್ಞಾನವೆಂಬ ನಿವಾಳಿಯನೆತ್ತಿ
ನಿತ್ಯನಿರಂಜನವೆಂಬ ನೀರಾಜನಮಂ ಬೆಳಗಲು,
ಬ್ರಹ್ಮನಾದವೆಂಬ ಘಂಟೆಯಂ ಬಾರಿಸಲು
ನಿತ್ಯಲಿಂಗಾರ್ಚನೆಗೆಡೆಮಾಡಲು,
ಇದರ ವರ್ಮಕರ್ಮಸ್ಥಿತಿಯನರಿದು ಶಿವಲಿಂಗಾರ್ಚನೆಯ ಮಾಡಬಲ್ಲಡೆ,
ಮತ್ರ್ಯದಲ್ಲಿ ನಾನಾರನೂ ಕಾಣೆನು.
ಕೂಡಲಸಂಗಮದೇವಾ,
ಪ್ರಭು ಶಿವಲಿಂಗಾರ್ಚನೆಯಂ ಮಾಡಲು, ನಾನೆ ಪರಿಚಾರಕನು.

30. ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು,
ಬಚ್ಚ ಬರಿಯ ಮಾತನಾಡುವೆನು.
ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ.
ಮೆಚ್ಚರು ನಿಮ್ಮವರು ಎನ್ನನು ಕೂಡಲಸಂಗಮದೇವಾ.

31. ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು.

32. ಅಜ್ಞಾನ ಹಿಂಗಿತ್ತು, ಅಹಂಕಾರವಡಗಿತ್ತು,
ಅರಿಷಡ್ವರ್ಗಂಗಳು ಹರಿಹಂಚಾದವು,
ಅಷ್ಟಮದಂಗಳು ಪಟ್ಟಪರಿಯಾದವು,
ದಶವಾಯುಗಳು ವಶವರ್ತಿಯಾದವು,
ಇಂದ್ರಿಯಂಗಳು ಬಂಧನವಡೆದವು,
ಮನೋವಿಕಾರ ನಿಂದಿತ್ತು.
ಕೂಡಲಸಂಗಮದೇವಾ,
ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ
ನಿರ್ವಾಣದ ಸಹಜ ನಿಲವ ಕಂಡು,
ನಮೋ ನಮೋ ಎನುತಿರ್ದೆನಯ್ಯಾ, ಪ್ರಭುವೆ.

33. ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ,
ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ,
ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ,
ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ,
ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ,
ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ,
ಅಜ್ಞಾನದಿಂದ ಹುಟ್ಟಿತ್ತು ಸಂಸಾರ,
ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ,
ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚು,
ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ,
ಕೂಡಲಸಂಗಮದೇವಾ, ಈ ಅಜ್ಞಾನಭ್ರಮೆಯ ಕೆಡಿಸಿದಲ್ಲದೆ
ನಿಮ್ಮನೊಡಗೂಡಬಾರದಯ್ಯಾ.

34. ಅಟ್ಟಟ್ಟಿಕೆಯ ಮಾತನಾಡಲದೇಕೋ
ಮುಟ್ಟಿ ಬಂದುದಕ್ಕಂಜಲದೇಕೋ
ಕಾದಿದಲ್ಲದೆ ಮಾಣೆನು, ಓಡಿದಡೆ ಭಂಗ ಹಿಂಗದಾಗಿ,
ಕೂಡಲಸಂಗಮದೇವಾ, ಎನ್ನ ಭಂಗ ನಿಮ್ಮದಾಗಿ.

35. ಅಡವಿಯಲೊಬ್ಬ ಕಡು ನೀರಡಿಸಿ,
ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯಾ.
ಕುರುಡ ಕಣ್ಣ ಪಡೆದಂತೆ,
ಬಡವ ನಿಧಾನವ ಹಡೆದಂತಾಯಿತ್ತಯ್ಯಾ.
ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ.

36. ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
`ಅಂಬೆ ಅಂಬೆ’ ಎಂದು ಕರೆವುತ್ತಲಿದ್ದೇನೆ,
`ಅಂಬೆ ಅಂಬೆ’ ಎಂದು ಒರಲುತ್ತಲಿದ್ದೇನೆ,
ಕೂಡಲಸಂಗಮದೇವ `ಬಾಳು ಬಾಳೆಂಬನ್ನಕ್ಕ.

37. ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ.
ಬಡವನೆಂದೆನ್ನ ಕಾಡದಿರಯ್ಯಾ.
ಎನಗೆ ಒಡೆಯರುಂಟು ಕೂಡಲಸಂಗನ ಶರಣರು.

38. ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ,
ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ !
ಮುಂದೆ ಪಥಕ್ಕೆ ಸಲ್ಲರು.
ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದಡೆ,
ನಗುತಲಿರಿದುಕೊಂಡಡೆ ಅಲಗು ನೆಡದಿಹುದೆ
ಕೂಡಲಸಂಗಮದೇವಾ.

39. ಅಡಿಗಡಿಗೆ ಲಿಂಗವನಡಿಯಡರಿ ನೋಡಿ ನೋಡಿ,
ಕಂಗಳು ಕಡೆಗೋಡಿವರಿದವೆನಗಯ್ಯಾ, ಎನ್ನ ಅಶ್ರುಜಲಂಗಳು !
ಆಲಿಕಲ್ಲ ರೂಹಿನಂತೆ, ಅರಗಿನ ಪುತ್ಥಳಿಯಂತೆ
ತನು ಪುಳಕಿತವಾದ ಬೆಮರ ಬಿಂದುಗಳೆಲ್ಲಾ !
ಕೂಡಲಸಂಗನ ದರ್ಶನಸ್ಪರ್ಶದಿಂದ
ಮನವೊಲಿದು ನೆರೆವ ಭರವನೇನ ಹೇಳುವೆನಯ್ಯಾ.

40. ಅಡಿಗಡಿಗೆ ಸ್ಥಾನನಿದಿ, ಅಡಿಗಡಿಗೆ ದಿವ್ಯಕ್ಷೇತ್ರ,
ಅಡಿಗಡಿಗೆ ನಿದಿಯು ನಿಧಾನ ನೋಡಯ್ಯಾ !
ಆತನ ಇರವೆ ವಾರಣಾಸಿ, ಅವಿಮುಕ್ತಿ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ.

41. ಅಡ್ಡ ತ್ರಿಪುಂಡ್ರದ, ಮಣಿಮಕುಟವೇಷದ
ಶರಣರ ಕಂಡಡೆ ನಂಬುವುದೆನ್ನ ಮನವು,
ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ.
ಇವಿಲ್ಲದವರ ಕಂಡಡೆ ನಂಬೆ ಕೂಡಲಸಂಗಮದೇವಾ.

42. ಅಡ್ಡ ವಿಭೂತಿುಲ್ಲದವರ ಮುಖಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದಠಾವು ನರವಿಂಧ್ಯ, ಹೊಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು,
ಕೂಡಲಸಂಗಮದೇವಾ.

43. ಅಡ್ಡದೊಡ್ಡ ನಾನಲ್ಲಯ್ಯಾ, ದೊಡ್ಡ ಬಸುರನಲ್ಲಯ್ಯಾ,
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯಾ.
ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿ ಅರಸಿ
ಬೋಧಿಸಲು, ಪ್ರಾಥರ್ಿಸಲು ಮುನ್ನ ನಾನರಿಯೆನಯ್ಯಾ,
ದೊಡ್ಡತನವೆನಗಿಲ್ಲಯ್ಯಾ, ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ.
ಅನಾಥ ನಾನಯ್ಯಾ, ಕೂಡಲಸಂಗಮದೇವಾ.

44. ಅಣ್ಣ, ತಮ್ಮ, ಹೆತ್ತಯ್ಯ ಗೋತ್ರವಾದಡೇನು
ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ.
ನಂಟುಭಕ್ತಿ ನಾಯಕನರಕ,
ಕೂಡಲಸಂಗಮದೇವಾ.

45. ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.

46. ಅದುರಿತು ಪಾದಾಘಾತದಿಂದ ಧರೆ,
ಬಿದಿರಿದುವು ಮಕುಟ ತಾಗಿ ತಾರಕೆಗಳು,
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ !
ಮಹೀಪಾದಾಘಾತಾದ್ ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ ಭುಜಪರಿಘರುಗ್ಣಗ್ರಹಗಣಂ
ಮುಹುರ್ದ್ಯೌದೌರ್ದಾಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ
ಜಗದ್ರಕ್ಷಾಯೈ ತ್ವಂ ನಟಸಿ ನನು ವಾಮೈವ ವಿಭುತಾ
ನಮ್ಮ ಕೂಡಲಸಂಗಮದೇವನಿಂದು ನಾಂಟ್ಯವನಾಡೆ.

47. ಅದ್ವೈತವ ಅಂತರಂಗದಲ್ಲಿ ಅರಿದು
ಹೊರಗೆ ದಾಸೋಹವ ಮಾಡದಿರ್ದಡೆ
ಎಂತಯ್ಯಾ ಉಭಯ ಸಂದೇಹದಲ್ಲಿ ನಿಜವಪ್ಪುದು
ನಿಮ್ಮ ಶರಣರ ಮನ ನೊಂದಲ್ಲಿ
ನಾನು ಸೈರಿಸಿಕೊಂಬೆನೆಂತಯ್ಯಾ
ಕೂಡಲಸಂಗಮದೇವಾ,
ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ.

48. ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ
ಭಕ್ತನ ಮನೆಯದು ಲಂದಣಗಿತ್ತಿಯ ಮನೆ.
ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ
ಸುದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದಡೆ
ತಾಯ ಹೆಸರಾುತ್ತು, ತಂದೆಯ ಹೆಸರಿಲ್ಲ
ಕೂಡಲಸಂಗಮದೇವಾ.

49. ಅನಾಯಸದಿಂದ ಮನೆಯ ಮಾಡಿ,
ನಿರಾಯಾಸದಿಂದ ಪರಮಸುಖಿ !
ರೂಪಿಸುವಲ್ಲಿ ರೂಪಾಧಿಕ, ನೋಡುವಲ್ಲಿ ನೋಟ ಘನ.
ಇಂತಹ ಸಹಜಸಂಗಿಯ ನಿಲವಿನ ಪರಿ;
ಉದಕದೊಳಗಣ ಬಿಂದು ಉದಯರತ್ನದಂತೆ
ಕೂಡಲಸಂಗನ ಶರಣರ ನಿಲವು. 

50. ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ! ದಮ್ಮಯ್ಯಾ!
ನಿಮ್ಮ ಧರ್ಮದ ಕವಿಲೆಯಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಮನೆಯ ಮಗ ನಾನಯ್ಯಾ.

51. ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು.
ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು.
ಸ್ಥಾವರ ಪೂಜೆ, ಜಂಗಮದ ಉದಾಸೀನ-
ಕೂಡಲಸಂಗಯ್ಯನೊಲ್ಲ ನೋಡಾ.

52. ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು,
ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು,
ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು,
ಅನುಭಾವವಿಲ್ಲದ ಏನನೂ ಅರಿಯಬಾರದು.
ತನ್ನಲ್ಲಿ ತಾ ಸನ್ನಿಹಿತವುಳ್ಳಡೆ
ಶಿವಶರಣರ ಸಂಗವೇತಕ್ಕೆನಲುಂಟೆ
ಕೂಡಲಸಂಗಮದೇವಯ್ಯಾ,
ನಿಮ್ಮ ಅನುಭಾವ
ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ

53. ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ;
ಅನ್ಯದೈವದ ಮಾತನಾಡಲಾಗದು,
ಅನ್ಯದೈವದ ಪೂಜೆಯ ನೋಡಲಾಗದು,
ಸ್ಥಾವರಲಿಂಗಕ್ಕೆರಗಲಾಗದು,
ಆ ಲಿಂಗದ ಪ್ರಸಾದವ ಕೊಳಲಾಗದು,
ಇಷ್ಟು ನಾಸ್ತಿಯಾದಡೆ
ಅನ್ಯದೈವವ ಬಿಟ್ಟು ಭಕ್ತನೆನಿಸುವನು.
ಇವರೊಳಗನುಸರಣೆಯ ಮಾಡಿದನಾದಡೆ,
ಕುಂಬಿಪಾಕ ನಾಯಕನರಕದಲ್ಲಿಕ್ಕುವ
ನಮ್ಮ ಕೂಡಲಸಂಗಮದೇವರು.

54. ಅನ್ಯವಿಚಾರವ ಮರೆದು ನಿಮ್ಮ ವಿಚಾರವೆಡೆಗೊಂಡಿತ್ತಾಗಿ,
ಪ್ರಾಣದ ನೆಲೆಗೆಟ್ಟಿತ್ತಯ್ಯಾ,
ದಶವಾಯುಗಳ ಸಂಚ ತಪ್ಪಿತ್ತಯ್ಯಾ,
ಕರಣಂಗಳ ಲಿಂಗಕಿರಣಂಗಳು ನುಂಗಿದವಯ್ಯಾ,
ಒಳಗೆ ಕರತಳಾಮಳಕಗೊಂಡೆನಯ್ಯಾ,
ಹೊರಗೆ ಅದೆಂತೆಂದರಿಯದೆ ನೀನೆ ಗತಿಯಾಗಿದ್ದೆ,
ಕೂಡಲಸಂಗಮದೇವಾ.

55. ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ
ಮತ್ತಾ ಶ್ವಪಚಯ್ಯನ ಸನ್ನಿಧಿುಂದ
ಭಕ್ತಿಯ ಸದ್ಗುಣವ ನಾನು ಅರಿವೆನಯ್ಯಾ.
ಕಷ್ಟಜಾತಿ ಜನ್ಮದಲಿ ಜನಿುಸಿದೆ ಎನ್ನ,
ಎನಗಿದು ವಿಧಿಯೆ ಕೂಡಲಸಂಗಮದೇವಾ

56. ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ

57. ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು,
ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವಾ.

58. ಅಮೂಲ್ಯನಪ್ರಮಾಣನಗೋಚರಲಿಂಗ,
ಆದಿಮಧ್ಯಾವಸಾನಗಳಿಲ್ಲದ ಸ್ವತಂತ್ರಲಿಂಗ,
ನಿತ್ಯನಿರ್ಮಳಲಿಂಗ,
ಅಯೋನಿಸಂಭವ ನಮ್ಮ ಕೂಡಲಸಂಗಮದೇವರು.

59. ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ.
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
ನಾಬಿರಾಜ ಮರುತಾದೇವಿಗೆ ಹುಟ್ಟಿದಾತನರುಹ
ಇವರೆಲ್ಲರು ಯೋನಿಜರೆಂಬುದ ತ್ರೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಗಳುಳ್ಳಡೆ ಹೇಳಿರೊ !

60. ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ,
ದೇವರೆಂಬವರೆತ್ತ ಹೋದರೇನಿಂ ಭೋ
ಅಂದೊಮ್ಮೆ ಓಡಿಹೋಗಿ ಆ ಶಿವನ ಮರೆಯ ಹೋಗುವಂದು
ದೇವರೆಂಬವರೆತ್ತ ಹೋದರೇನಿಂ ಭೋ
ಕೂಡಲಸಂಗಯ್ಯ ದೇವರಿಗೆ ದೇವನು,
ಇವರೆಲ್ಲ ಆಳೆಂಬುದನರಿಯಿರಿಂ ಭೋ !

61. ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ,
ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ,
ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯ ಮೇಲೆ,
ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ. 

62. ಅಯ್ಯಾ ! ನೀನೆಂದಡೆ ಏನೆಂಬೆನು
ನಿನ್ನ ಹಂಗೇನು ಹರಿಯೇನು
ನಿನ್ನ ಮುಖದಲ್ಲಿ ಒಂದಗುಳು ಸವೆಯದು.
ನಿನ್ನ ಪ್ರಸಾದವ ಕೊಂಡೆನ್ನ ಭವಕ್ಕೆ ಬೀಜವಾಯಿತ್ತು.
ಜಂಗಮವೆ ಲಿಂಗವೆಂದು ಒಕ್ಕುದ ಕೊಂಡಡೆ
ಎನ್ನ ಭವಂ ನಾಸ್ತಿಯಾಯಿತ್ತು ಕೂಡಲಸಂಗಮದೇವಾ.

63. ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು.
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದವಾಗಿ,
ಅಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ.

64. ಅಯ್ಯಾ ನೀ ಒಲಿದಡೆ
ಹುಚ್ಚನೆಂದೆನಿಸಿ ಕಲ್ಲಲಿಡಿಸಿ,
ಎಲ್ಲರ ಕೈಯ್ಯಲು ಸುಡಿಸಿ,
ನಿನ್ನ ನಚ್ಚಿದವರನ್ನೆಲ್ಲ [ಬ]ಡಿಸು
ಕೂಡಲಸಂಗಮದೇವಾ.

65. ಅಯ್ಯಾ, ಅಯ್ಯಾ, ಎಂದು ಕರೆವುತ್ತಲಿದ್ದೇನೆ.
ಅಯ್ಯಾ, ಅಯ್ಯಾ, ಎಂದು ಒರಲುತ್ತಲಿದ್ದೇನೆ.
ಓ ಎನ್ನಲಾಗದೆ ಅಯ್ಯಾ
ಆಗಳೂ ನಿಮ್ಮ ಕರೆವುತ್ತಲಿದ್ದೇನೆ
ಮೋನವೇ ಕೂಡಲಸಂಗಮದೇವಾ.

66. ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ,
ಎನ್ನ ಮನದಲ್ಲಿ ತನ್ನ ನಿಲವ ತೋರಿದ,
ಎನ್ನ ಅರಿವಿನಲ್ಲಿ ನಿಮ್ಮ ತೋರಿದ,
ಇಂತೀ ತ್ರಿವಿಧಸ್ವಾಯತವನು
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ತೋರಿದ.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನ ಕರುಣದಿಂದ
ಮಡಿವಾಳನೆಂಬ ಪರುಷ ಸಾಧ್ಯವಾಯಿತ್ತೆನಗೆ.

67. ಅಯ್ಯಾ, ಎನ್ನ ಕೈಯ ದರ್ಪಣ [ಸಂದಿತ್ತು],
ಆಸ್ಥಾನದ ಜ್ಯೋತಿ ನಂದಿತ್ತು,
ಸರಸ್ವತಿಯ ಭಂಡಾರ ಸೂರೆಹೋಯಿತ್ತು,
ನಮ್ಮಯ್ಯ ಕಿನ್ನರಿಬೊಮ್ಮಣ್ಣ ಹೋದನು.
ತಾರಾಮಂಡಲದಲ್ಲಿ ಕೇಳಿಸುವ ತಂದೆ ಹೋದನು, ನಾನೆಲ್ಲಿ
ಅರಸುವೆನು ಕೂಡಲಸಂಗಮದೇವಯ್ಯ
ತನ್ನಾಳು ಕಿನ್ನರಿಬೊಮ್ಮಣ್ಣನನೊಯ್ದಡೆ ನಾನೆಲ್ಲಿ ಅರಸುವೆನು

68. ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.

69. ಅಯ್ಯಾ, ಎಳಗರು ತಾಯನರಸಿ ಬಳಲುವಂತೆ
ನಾ ನಿಮ್ಮನರಸಿ ಬಳಲುತ್ತಿದ್ದೇನೆ.
ಅಯ್ಯಾ, ನೀವೆನ್ನ ಮನಕ್ಕೆ ಪ್ರಸನ್ನವಾಗಿ ಕಾರುಣ್ಯವ ಮಾಡು.
ಅಯ್ಯಾ, ನೀವೆನ್ನ ಮನಕ್ಕೆ ನೆಲೆವನೆಯಾಗಿ
ಕಾರುಣ್ಯವ ಮಾಡು, ಕಾರುಣ್ಯವ ಮಾಡು.
ನೀನಿನಿತು ಲೇಸನೀಯಯ್ಯಾ,
ಅಂಬೇ ಅಂಬೇ ಕೂಡಲಸಂಗಮದೇವಾ.

70. ಅರತುದಯ್ಯಾ ಅಂಗಗುಣ, ಒರತುದಯ್ಯಾ ಭಕ್ತಿರಸ,
ಆವರಿಸಿತ್ತಯ್ಯಾ ಲಿಂಗವಂಗವನು,
ಏನೆಂದರಿಯೆನಯ್ಯಾ ಲೋಕಲಾಕಿಕವ.
ಲಿಂಗಭ್ರಾಂತನಾದೆನಯ್ಯಾ ಕೂಡಲಸಂಗಯ್ಯಾ,
ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ. 

71.ಅರಸನ ಕಂಡು ತನ್ನ ಪುರುಷನ ಮರೆದಡೆ
ಮರನನೇರಿ ಕಯ್ಯ ಬಿಟ್ಟಂತಾಯಿತ್ತಯ್ಯಾ.
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖ ಲಿಂಗವಾದ ಕಾರಣ.

72. ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ.
`ತಾರೌ ಅಗ್ಘವಣಿ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು.
`ಕೂಡಲಸಂಗನ ಮಹಾಮನೆಯಲ್ಲು
ಒಕ್ಕುದನುಣೌ ತೊತ್ತೇ ಎಂಬರು.

73. ಅರಸರು ಮಂಚಕ್ಕೆ ಬರಿಸಿ, ಎನ್ನ ಬೆರಸಿದ ಬಳಿಕ
ಆನು ಅಂಜುವಳೇ ಆನು ಸಿರಿಯಕ್ಕನೇ.
ಪರುಷ ಮುಟ್ಟಿದ ಬಳಿಕ ಲೋಹವೇ
ಕೂಡಲಸಂಗಮದೇವ, ಎನ್ನನೊಲ್ಲದಡಾನು ಬದುಕುವೆನೆ

74. ಅರಸು ಮುನಿದಡೆ ನಾಡೊಳಗಿರಬಾರದಯ್ಯಾ,
ಗಂಡ ಮುನಿದಡೆ ಮನೆಯೊಳಗೆ ಇರಬಾರದಯ್ಯಾ.
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ

75. ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ.
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ.
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ. 

76. ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು,
ಬಯಸುವ ಬಯಕೆ ಕೈಸಾರಿದಂತಾಯಿತ್ತು,
ಹಲವು ದಿವಸಕೆ ನಂಟರ ಕಂಡಂತಾಯಿತ್ತು.
ಅಂದೊಮ್ಮೆ ಅನಿಮಿಷಂಗೆ ಕೋಳುಹೋದ ಲಿಂಗವೆಂದು
ಉಮ್ಮಹದಿಂದ ಮಂಗಳಾರತಿಯ ಬೆಳಗಿ,
ನವರತ್ನದ ಹಾರ ತೋರಣವ ಕಟ್ಟಿ,
ಸಂತೋಷದಿಂದೆನ್ನ ಮನವು ತೊಟ್ಟನೆ ತೊಳಲಿ,
ತಿಟ್ಟನೆ ತಿರುನಗೆಫ, ದೃಷ್ಟವ ಕಂಡೆನಯ್ಯಾ.
ಬಿಟ್ಟು ಹಿಂಗಿದವೆನ್ನ ಭವಮಾಲೆಗಳು,
ಗೋಹೇಶ್ವರನ ಶರಣ ಪ್ರಭುದೇವರ ಕರಸ್ಥಲದೊಳಗೆ,
ಕೂಡಲಸಂಗಮದೇವರೆಂಬ ಲಿಂಗವ ಕಂಡೆನಾಗಿ.

77. ಅರಿದರಿದರಿದು !
ಸಮಗಾಣಿಸಬಾರದು, ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದಡೆ
ಈಶ್ವರನು ಒಡೆಯಿಕ್ಕದೆ ಮಾಣುವನೆ
ಪಾತ್ರ ಅಪಾತ್ರವೆಂದು ಕಂಡಡೆ ಶಿವನೆಂತು ಮೆಚ್ಚುವನು
ಜೀವ ಜೀವಾತ್ಮವ ಸರಿಯೆಂದು ಕಂಡಡೆ
ಸಮವೇದಿಸದಿಪ್ಪನೆ ಶಿವನು
ತನ್ನ ಮನದಲ್ಲಿ `ಯತ್ರ ಜೀವಃ ತತ್ರ ಶಿವ’ನೆಂದು ಸರ್ವಜೀವದಯಾಪಾರಿಯಾದಡೆ, ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ 

78. ಅರಿದರಿದು ಎನಗಿಂದು ಕಣ್ಗೆ ಮಂಗಳವಾಯಿತ್ತು,
ಒಂದಹುದು ಒಂದಾಗದೆಂಬ ಭ್ರಮೆಯವನಲ್ಲ,
ಬೇಕು ಬೇಡೆಂಬ ಜಂಜಡದವನಲ್ಲ,
ಎಡೆವರಿಯದ ನೋಟ, ನುಡಿಯ ಸಡಗರವರತು
ಎಡೆಯಾಟ ಕೋಟಲೆಯ ಕಳೆಯ ಬಂದನು,
ನೋಡುವರ ಮನದ ಸುಖದ ಸಾಗರನಿಧಿಯನೇನೆಂದುಪಮಿಸುವೆನು
ಎನ್ನ ಉಭಯಕರ್ಮವ ಕಳೆದು ತನ್ನೊಳಗೆ ಇಂಬಿಟ್ಟುಕೊಳಬಂದನು,
ಕೂಡಲಸಂಗಮದೇವ, ಕೃಪಾಮೂರ್ತಿ.

79. ಅರಿದಿಹೆನೆಂದಡೆ ಅರಿವಿಂಗಸಾಧ್ಯ,
ನೆನೆದಿಹೆನೆಂದಡೆ ನೆನಹಿಂಗಸಾಧ್ಯ,
ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,
ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ,
ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿಲಿಂಗವು
ಉದಯವಪ್ಪುದೆಂಬ ಶ್ರುತಿ ಹುಸಿಯೆ
ಕೂಡಲಸಂಗಮದೇವಾ, ನಿಮ್ಮ ಮಹಾನುಭಾವರ ಮಥನದಿಂದ
ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ.

80. ಅರಿದುದ ಅರಿಯಲೊಲ್ಲದು, ಅದೆಂತಯ್ಯಾ !
ಮರೆದುದ ಮರೆಯಲೊಲ್ಲದು, ಅದೆಂತಯ್ಯಾ !
ಅರಿದು ಮರೆದ ಮನವ
ಕೂಡಲಸಂಗಯ್ಯ ಬಲ್ಲ.

81. ಅರಿಯದೆ ಜನನಿಯ ಜಠರದಲ್ಲಿ
ಬಾರದ ಭವಂಗಳ ಬರಿಸಿದೆ ತಂದೆ,
ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?
ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !
ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.

82. ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ,
ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ,
ನಿರ್ನಾಮವಾಯಿತ್ತು, ನಿಃಪತಿಯಾಯಿತ್ತು,
ಅಗಮ್ಯದಲ್ಲಿ ಗಮನ ಕೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು,
ಕೂಡಲಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು.

83. ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ,
ಅರಿವನ್ನಕ್ಕರ ಹಾಡಿ ಹೊಗಳಿದೆ.
ಅರಿವುಗೆಟ್ಟು ಮರಹು ನಷ್ಟವಾಗಿ,
ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ,
ಕೂಡಲಸಂಗಯ್ಯನಲ್ಲಿ ಸರ್ವನಿವಾಸಿಯಾಗಿರ್ದೆನು. 

84. ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ,
ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ.
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ. 

85. ಅರಿದಿಹೆನೆಂದಡೆ ಅರಿವಿಂಗಸಾಧ್ಯ,
ನೆನೆದಿಹೆನೆಂದಡೆ ನೆನಹಿಂಗಸಾಧ್ಯ,
ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,
ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ,
ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿಲಿಂಗವು
ಉದಯವಪ್ಪುದೆಂಬ ಶ್ರುತಿ ಹುಸಿಯೆ
ಕೂಡಲಸಂಗಮದೇವಾ, ನಿಮ್ಮ ಮಹಾನುಭಾವರ ಮಥನದಿಂದ
ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ.

86. ಅರಿದುದ ಅರಿಯಲೊಲ್ಲದು, ಅದೆಂತಯ್ಯಾ !
ಮರೆದುದ ಮರೆಯಲೊಲ್ಲದು, ಅದೆಂತಯ್ಯಾ !
ಅರಿದು ಮರೆದ ಮನವ
ಕೂಡಲಸಂಗಯ್ಯ ಬಲ್ಲ.

87. ಅರಿಯದೆ ಜನನಿಯ ಜಠರದಲ್ಲಿ
ಬಾರದ ಭವಂಗಳ ಬರಿಸಿದೆ ತಂದೆ,
ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?
ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !
ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.

88. ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ,
ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ,
ನಿರ್ನಾಮವಾಯಿತ್ತು, ನಿಃಪತಿಯಾಯಿತ್ತು,
ಅಗಮ್ಯದಲ್ಲಿ ಗಮನ ಕೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು,
ಕೂಡಲಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು.

89. ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ,
ಅರಿವನ್ನಕ್ಕರ ಹಾಡಿ ಹೊಗಳಿದೆ.
ಅರಿವುಗೆಟ್ಟು ಮರಹು ನಷ್ಟವಾಗಿ,
ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ,
ಕೂಡಲಸಂಗಯ್ಯನಲ್ಲಿ ಸರ್ವನಿವಾಸಿಯಾಗಿರ್ದೆನು. 

90. ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ,
ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ.
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ. 

91. ಅರಿವಿಂದಲರಿವೆನೆಂದಡೆ ಅರಿವಿಂಗಸಾಧ್ಯ,
ಅರಿಯದೆ ಅರಿದ ಪರಿ ಎಂತಯ್ಯಾ
ಭಾವಿಸಿ ಬೆರೆಸುವೆನೆಂದಡೆ ಭಾವ ನಿರ್ಭಾವವೆಂದುದಾಗಿ
ಮತ್ತೆ ಭಾವಿಸಿಯಲ್ಲದೆ ಕಾಣಬಾರದಯ್ಯಾ.
ವಾಙ್ಮನಕ್ಕಗೋಚರವೆಂದಡೆ
ನುಡಿಯಲಿಲ್ಲದೆ ನಡೆ ಸಾಧ್ಯವಹ ಪರಿ ಎಂತು ಹೇಳಯ್ಯಾ
ಹಲವು ಮಾತಿನ ನಿಲವು ಒಂದೆಂಬ
ನುಡಿಗಡಣದ ನಿಜವ ಬಲ್ಲವರಾರು ಹೇಳಯ್ಯಾ
ನಿಮ್ಮ ಮಾತೆಂಬ ಪರತತ್ವವೊಂದಲ್ಲದೆ ಎರಡುಂಟೆ
ಕೂಡಲಸಂಗಮದೇವ ಕಡೆಮುಟ್ಟ ನೋಡುವಡೆ
ನುಡಿಗೆಡೆಯಿಲ್ಲ, ಕೃಪೆಯಿಂದ ಕರುಣವ ಮಾಡಯ್ಯಾ ಪ್ರಭುವೆ. 

92. ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ,
ಅರಿವು ನೆರೆ ಕೂಡಿ, ಆ[ಚಾ]ರವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ,
ಶ್ರೀಗುರು ಕೃಪೆಯ ಮಾಡಿದ ಪ್ರಾಣಲಿಂಗದ ಘನವೆಂತೆಂದಡೆ:
ಮತ್ಸ್ಯನುಂಗಿದ ಮಾಣಿಕ್ಯದಂತೆ,
ಮುತ್ತುನುಂಗಿದ ನೀರಿನಂತೆ,
ಕಣ್ಣಾಲಿ ನುಂಗಿದ ನೋಟದಂತೆ,
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ
ಸ್ವಯಾನುಭಾವಿಗಳ ಅನುಭಾವವ ತೋರಿ ಬದುಕಿಸಾ,
ಕೂಡಲಸಂಗಮದೇವಾ.

93. ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು,
ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು,
ಕಾಬವನ ಕಾಣಿಕೆಯ ಕೆಡಿಸಿತ್ತು ಕಾಮವೆಂಬ ಕತ್ತಲೆ,
ಎನ್ನ ಮನದ ಭಯಕ್ಕಂಜಿ ನಿಮ್ಮ ಮೊರೆಹೊಕ್ಕೆ ಕೂಡಲಸಂಗಮದೇವಾ. 

94. ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.

95. ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ಆನಿದ್ದೇನಯ್ಯಾ.
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮ ಒಲವಿಲ್ಲದಂತೆ ಆನಿದ್ದೇನಯ್ಯಾ.
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ,
ನೀನೊಲಿದಂತೆ ಸಲಹಯ್ಯಾ, ಕೂಡಲಸಂಗಮದೇವಾ.

96. ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ,
ದಾರಿ ಸಂಗಡ ಬೇಡ, ದೂರ ನುಡಿಯಲು ಬೇಡ,
ಕೂಡಲಸಂಗನ ಶರಣರಲ್ಲಿ
ಅಚ್ಚಲಿಂಗೈಕ್ಯಂಗೆ ತೊತ್ತಾಗಿಹುದಯ್ಯಾ.

97. ಅರೆವನಯ್ಯಾ ಸಣ್ಣವಹನ್ನಕ್ಕ,
ಒರೆವನಯ್ಯಾ ಬಣ್ಣಗಾಬನಕ್ಕ.
ಅರೆದಡೆ ಸಣ್ಣವಾಗಿ, ಒರೆದಡೆ ಬಣ್ಣವಾದಡೆ
ಕೂಡಲಸಂಗಮದೇವನೊಲಿದು ಸಲಹುವನು.

98. ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ.

99. ಅರ್ಥ ಪ್ರಾಣ ಅಬಿಮಾನವನೊಪ್ಪಿಸಿದಲ್ಲಿ ಭಕ್ತನಪ್ಪನೆ ಅಲ್ಲ.
ಆದಿರುದ್ರನ ಮಗಳು ಆದಿಶಕ್ತಿ,
ಆದಿಶಕ್ತಿಯ ಮಗ ವಿಷ್ಣು,
ವಿಷ್ಣುವಿನ ಅರ್ಧಾಂಗಿ ಲಕ್ಷ್ಮಿ.
ಈ ತೊತ್ತಿನ ತೊತ್ತಿನ ಪಡಿದೊತ್ತನೊಪ್ಪಿಸಿದಲ್ಲಿ ಭಕ್ತನಪ್ಪನೆ ಅಲ್ಲ.
ಎನ್ನ ಮನದೊಡೆಯ ಮಹಾದೇವಾ,
ನಿಮ್ಮ ಮನವ ನಿಮಗೊಪ್ಪಿಸಿ ಶುದ್ಧ ನಾನು ಕಾಣಾ,
ಕೂಡಲಸಂಗಮದೇವಾ.

100. ಅರ್ಥ ಪ್ರಾಣ ಅಭಿಮಾನ ನಿಮ್ಮದೆಂ’ಬಿರಿ,
ಒತ್ತಿ ನೋಡಿದಡೆ ಮುಟ್ಟಲೀಯಿರಿ.
ಮುಟ್ಟೆ ಬಂದಲ್ಲಿ ಕಠಾರಿಯ ಕಾಳಗವ ನೀವಾಡಿಸುವಿರಲ್ಲದೆ
ಲಿಂಗಜಂಗಮವಂತನಾಗಬಾರದು.
ಕೂಡಲಸಂಗಮದೇವಾ, ವೇಷಡಂಭಕರಿಗೆ ಭಕ್ತಿ ಎಂತಪ್ಪುದಯ್ಯಾ. 

Basavanna Vachana In kannada pdf

ನಾವು ನಿಮ್ಮೆಲ್ಲರಿಗೂ ಬಸವಣ್ಣನ ವಚನಗಳು ಇಷ್ಟಆಗಿವೆ ಅಂದುಕೊಳ್ತೀವಿ ದಯವಿಟ್ಟು ಬಸವಣ್ಣನ ವಚನಗಳನ್ನು ನಿಮ್ಮ ಬಂದವರ ಜೊತೆಗೆ ಶೇರ್ ಮಾಡಿ.

    About the author

    Leave a Reply

    Your email address will not be published. Required fields are marked *

    Latest Posts